ಲೌಕಿಕವಾದ ಈ ಜೀವ ಜಗತ್ತು ಎಂಬುದು ಎಷ್ಟು ಸತ್ಯವೋ ಹಾಗೆಯೇ ಅಲೌಕಿಕವಾದ ಇನ್ನೊಂದು ಪ್ರಪಂಚ ಇದೇ ಎನ್ನುವುದು ಅಷ್ಟೇ ಸತ್ಯ… “ಮರಣ ಬರುವುದರೊಳಗೆ ಋಣವ ತೀರಿಸು” ಎಂಬ ಈ ಮಾತು ಯಾವಾಗಲೂ ನನ್ನ ಮನದಲ್ಲಿ ಉದ್ಭವಿಸುತ್ತಿತ್ತು. ದೇಹವನ್ನು ಕೊಟ್ಟು ಅದಕ್ಕೆ ಸಂಸ್ಕಾರವನ್ನು ಕೊಡುವ ತಂದೆ-ತಾಯಿಗಳು; ಈ ಪ್ರಕೃತಿಯನ್ನು ಅನುಗ್ರಹಿಸಿ ನಮ್ಮ ಬದುಕಿಗೆ ಬೇಕಾದ ಎಲ್ಲಾ ಸಂಪತ್ತುಗಳನ್ನು ಕರುಣಿಸುವ ದೇವತೆಗಳು; ಮನುಷ್ಯ ಜೀವಿತದ ಅಂತಿಮವಾದ ಗುರಿಯನ್ನು ಪಡೆಯಲಿಕ್ಕೆ ಬೇಕಾದ ಜ್ಞಾನವನ್ನು ಅನುಗ್ರಹಿಸುವ ಋಷಿಗಳು, ನಮ್ಮ ಪೂರ್ಣ ಬದುಕಿಗೆ ಆಧಾರಭೂತರು.
ಇಲ್ಲಿ ಜನ್ಮ ತಳೆದ ಪ್ರತಿಯೊಬ್ಬ ಮನುಷ್ಯನೂ ದೇವ, ಋಷಿ, ಪಿತೃ ಎನ್ನುವ ಮೂರು ಋಣಗಳಿಂದ ಬಂಧಿತನಾಗಿರುತ್ತಾನೆ. ಇದರ ಜೊತೆಗೆ ಸಾಮಾಜಿಕ ಋಣಗಳೂ ಕೂಡ ಸುತ್ತುವರೆಯಲ್ಪಟ್ಟಿರುತ್ತದೆ. ದೇವ ಋಷಿ ಪಿತೃ ಋಣಗಳಿಂದ ಮುಕ್ತರಾಗುವ ಮಾರ್ಗವನ್ನು ನಮ್ಮ ಹಿಂದಿನ ಪೂರ್ವಜರು ತೋರಿಸಿಕೊಟ್ಟಿದ್ದಾರೆ. ನಾವು ಸಮಾಜದ ಹಲವು ಮುಖಗಳಿಂದ ಸಂಪತ್ತನ್ನು ಪಡೆದು ಬದುಕನ್ನು ಸುಂದರವಾಗಿಸಿಕೊಂಡಿದ್ದೇವೆ. ಸಿಂಧು ರೂಪದ ಸಮಾಜದಿಂದ ನಾವು ಪಡೆದದ್ದನ್ನು ಬಿಂದುಮಾತ್ರವಾದರೂ ಪುನಃ ಸಮಾಜಕ್ಕೆ ಸಮರ್ಪಿಸಬೇಕಾದದ್ದು ನಮ್ಮ ಕರ್ತವ್ಯ. ಹಾಗಾದಾಗ ಮಾತ್ರ ಅದು ಕೃತಜ್ಞತೆ ಎನ್ನುವ ಪದಕ್ಕೆ ಅರ್ಹವಾಗುತ್ತದೆ. ಆ ದೃಷ್ಟಿಯಿಂದಲೇ ಅನುಭಾವಿಗಳು ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ನಾಣ್ಣುಡಿಯನ್ನು ಸಾರಿದರು… ಈ ಋಣಗಳಿಂದ ಸಂಪೂರ್ಣ ಮುಕ್ತರಾಗಲು ಆಗವುದಿಲ್ಲವಾದರೂ ಮನಸಿನಾಳದಲ್ಲಿ ಮೂಡಿಬರುವ ಕೆಲವು ಯೋಚನೆಗಳನ್ನು ಯೋಜನಾ ರೂಪದಲ್ಲಿ ಅಳವಡಿಸಿ ಮುನ್ನೆಡದರೆ ಸ್ವಲ್ಪಭಾಗ ಋಣದಿಂದ ಮುಕ್ತರಾಗಬಹುದೇನೋ ಎಂಬುದು ನನ್ನ ಅನಿಸಿಕೆ.
ಪ್ರಕೃತ ನನ್ನ ಬದುಕಿಗೆ ಸಂಸ್ಕಾರ – ವಿದ್ಯೆಯನ್ನು ಕೊಟ್ಟು ಬೆಳೆಸಿದ ತೀರ್ಥರೂಪರು ದಿ ವೇ ಕೆ.ಎನ್. ಶ್ರೀನಿವಾಸ ಭಟ್ಟರು. ಗುರುಭಕ್ತರಾಗಿ, ಪುರೋಹಿತರಾಗಿ, ಸಮಾಜದ ಒಬ್ಬ ಸಾತ್ವಿಕ ನಾಗರಿಕರಾಗಿ, ಬದುಕನ್ನು ಸಾಗಿಸಿದವರು. ಅವರ ಪ್ರೇರಣೆ – ಸಮಾಜಬಂಧುಗಳ ಸಹಕಾರ – ಗುರುಪರಂಪರೆ ನೀಡಿದ ಜ್ಞಾನದ ಹಿನ್ನೆಲೆಯಲ್ಲಿ ನಾನು ಬದುಕನ್ನು ಸಾಗಿಸುತ್ತಾ ಇದ್ದೇನೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಸಲ್ಲಿಸಬೇಕೆಂಬ ನನ್ನ ಯೋಚನೆಯನ್ನು ಯೋಜನೆಯನ್ನಾಗಿ ಪರಿವರ್ತಿಸಲು ಮೂಡಿದ ಕ್ರಿಯಾರೂಪವಾದ ವೇದಿಕೆಯೇ “ಶ್ರೀ ಪ್ರತಿಷ್ಠಾನಮ್”
ಈ ವೇದಿಕೆಯ ಮೂಲಕ ವಿದ್ಯಾಶ್ರಯ – ಸ್ವಸ್ಥಾಶ್ರಯ – ಸಂಸ್ಕಾರಾಶ್ರಯ ಎಂಬ ಈ ಮುಖಗಳಿಂದ ಬಿಂದರೂಪವಾದ ಸೇವೆಯನ್ನು ಸಲ್ಲಿಸಿ ಕೃತಜ್ಞನಾಗಲು ಹಂಬಲಿಸಿದ್ದೇನೆ.
ಸಿಂಧು ರೂಪದ ಸಮಾಜಕ್ಕೆ ಬಿಂದು ರೂಪದ ಸಹಕಾರ.