ಶ್ರೀ ಪ್ರತಿಷ್ಠಾನಮ್ (ರಿ.) ನಡೆದು ಬಂದ ದಾರಿ

 ಈ ಜೀವ ಜಗತ್ತಿನಲ್ಲಿ ಮನುಜ ಜನ್ಮ 
ಬಹಳ ವಿಶೇಷವಾದುದು,ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳನ್ನು ಸರಿಯಾಗಿ ಸೇವಿಸಿ ಆನಂದದ ಗಣಿಯಾದ ಪರಮಾತ್ಮನ ಪದತಲದಲ್ಲಿ ಸೇರುವ ಅವಕಾಶ ಈ ಮನುಷ್ಯ ಜನ್ಮದಲ್ಲಿ ಮಾತ್ರ ಸಾಧ್ಯ. 

          ಇಂದಿನ ಕಾಲಘಟ್ಟದಲ್ಲಿ ಅರ್ಥಪೂರ್ಣವಾದ ಬದುಕನ್ನು ಸಾಗಿಸಲು ಆರ್ಥಿಕವಾಗಿ ನಮಗೆ ತೊಂದರೆ ಇದ್ದರೂ ಕೂಡ, ನಮ್ಮ ತಂದೆಯವರು ನಮಗೆ ಕೊಟ್ಟ ಸಂಸ್ಕಾರದಿಂದಲೋ ಅಥವಾ ನಮ್ಮ ಪೂರ್ವಜರ ಆಶೀರ್ವಾದದಿಂದಲೋ ಈ ದೇವ ಋಷಿ ಪಿತೃ ಋಣಗಳ ಜೊತೆಗೆ ಸಾಮಾಜಿಕ ಋಣದಿಂದಲೂ ಪರಿಹಾರ ಕಾಣುವವುದಕ್ಕಾಗಿ ಆರೋಗ್ಯ, ವಿದ್ಯೆ, ಸಾಂಸ್ಕೃತಿಕ ಕಲೆ, ಧಾರ್ಮಿಕ ವಿಚಾರ, ಹಿಂದೂ ಸಂಸ್ಕೃತಿ, ವೇದ ಮತ್ತು ಸಂಸ್ಕೃತ ಪೋಷಣೆ, ಸಾಮಾಜಿಕ ಸೇವೆ, ಅಶಕ್ತರಿಗೆ ಕಷ್ಟಕಾಲದಲ್ಲಿ ಸ್ಪಂದನೆ, ಇದಕ್ಕೆಲ್ಲ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂಬ ಸದುದ್ದೇಶದಿಂದ ನಮ್ಮ ಕುಟುಂಬದವರೆಲ್ಲರೂ ಸೇರಿ ನಮ್ಮ ತಂದೆಯವರಾದ ಶ್ರೀ ಶ್ರೀನಿವಾಸ ಭಟ್ಟರ ಸ್ಮರಣಾರ್ಥವಾಗಿ  “ಶ್ರೀ ಪ್ರತಿಷ್ಠಾನಮ್” ಎಂಬ ಒಂದು ಟ್ರಸ್ಟ್ ಮಾಡಿದ್ದೇವೆ.
              ವಿದ್ಯೆ, ಆರೋಗ್ಯ, ಧಾರ್ಮಿಕ ಸಂಸ್ಕೃತಿ,  ಈ ಮೂರು ವಿಷಯಗಳನ್ನು ಪ್ರಧಾನವಾಗಿಟ್ಟುಕೊಂಡು ವಿದ್ಯಾಶ್ರಯ – ಸ್ವಸ್ಥಾಶ್ರಯ –  ಸಂಸ್ಕಾರಾಶ್ರಯ ಎಂಬ ಈ ಮೂರು ಮುಖಗಳಿಂದ ಸಿಂಧು ರೂಪವಾದ ಸಮಾಜಕ್ಕೆ ಬಿಂದು ರೂಪವಾದ ಸಹಕಾರವನ್ನು ಈ ವೇದಿಕೆಯ ಮೂಲಕ ಕೊಡಬೇಕು ಹಾಗೆಯೇ ಈ ಸೇವೆಯ ಪುಣ್ಯಫಲಗಳು ನಮ್ಮ ಕುಟುಂಬಕ್ಕೆ ಮಾತ್ರಾ ಸೀಮಿತವಾಗಬಾರದು ಎಂಬ ಸದಾಶಯದಿಂದ ಶಕ್ತರಿಂದ ದೇಣಿಗೆಯನ್ನು ಸಂಗ್ರಹಿಸಿ ಅಶಕ್ತರು ಯಾರಿದ್ದಾರೆಂದು ಗುರುತಿಸಿ, ಗುರುತಿಸಿದ್ದನ್ನು ಸರಿಯಾಗಿ ವಿಮರ್ಶಿಸಿ ನಂತರ ಅವರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಹಲವಾರು ಜನರ ಸಹಕಾರದಿಂದ ನಡೆಯುತ್ತಿರುವ ಈ ಸಂಸ್ಥೆ ಸಮಾಜದಲ್ಲಿ ಮಾದರಿಯಾಗಬೇಕು, ಹಾಗಾಗಿ ಕಾನೂನಿನ ಚೌಕಟ್ಟನ್ನು ಮೀರಬಾರದು ಎಂದು ಒಂದು ಸಮಿತಿಯನ್ನು ಮಾಡಿಕೊಂಡು ದಿನಾಂಕ 21-04-2022 ರ ಗುರುವಾರದಂದು ಸಮಿತಿಯನ್ನು ನೊಂದಾಯಿಸಲಾಯಿತು..

           ಶುಭಕೃತ್ ಸಂವತ್ಸರದ ಉತ್ತರಾಯಣ ವೈಶಾಖ ಬಹುಳ ಚತುರ್ಥಿ ದಿನಾಂಕ 19-05-2022 ಗುರುವಾರ ಸಂಕಷ್ಠಹರ ಚತುರ್ಥಿಯ ಶುಭಾವಸರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಹೋಮವನ್ನು ಮಾಡುವುದರ ಮೂಲಕ ಧಾರ್ಮಿಕವಾಗಿ ಸಂಸ್ಥೆಗೆ ಚಾಲನೆ ನೀಡಲಾಯಿತು. ಲೋಕದೊಳಿತಿಗೆ ಮಾಡುತ್ತಿರುವ ಈ ಸೇವಾ ಕೈಂಕರ್ಯಕ್ಕೆ ನಮ್ಮ ಸಂಸ್ಥೆಯ ಸರ್ವರೂ ಬಲ – ಬೆಂಬಲವಾಗಿ ಕೈ ಜೋಡಿಸಿದ್ದಾರೆ
ಶ್ರೀ ಪ್ರತಿಷ್ಠಾನಮ್ ಟ್ರಸ್ಟ್ ನ ಎಲ್ಲಾ ಕಾರ್ಯ ಚಟುವಟಿಕೆಗಳೊಂದಿಗೆ ತನು-ಮನ-ಧನ ಸಹಾಯದಿಂದ ತಾವೆಲ್ಲರೂ ನಮ್ಮೊಂದಿಗಿದ್ದು ಬೆಂಬಲವಾಗಿ ನಿಂತು ಮುನ್ನಡೆಸಬೇಕೆಂದು ಮತ್ತೊಮ್ಮೆ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.
“ಇದು ಯಾರ ಲಾಭಕ್ಕಾಗಿಯೂ ಅಲ್ಲ ಇದು ಅಶಕ್ತರ ನೆರವಿಗಾಗಿ.
ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ,
ಕಷ್ಟ ಕಾಲದಿ ಕೈ ಹಿಡಿದು ಮುನ್ನೆಡೆಸುವುದೇ ನಮ್ಮ ಅಪೇಕ್ಷೆ.”

-ಶ್ರೀಧರ ಹೆಚ್ ಎಸ್